ಸರಕಾರಿ ಪ್ರೌಢಶಾಲೆ ಬೇಕೂರು
ಬೇಕೂರು ಮತ್ತು ಸುತ್ತಮುತ್ತಲಿನ ಜನತೆಯ ಕಲ್ಪನೆಯ ಕೂಸಾದ ಸರಕಾರಿ ಪ್ರೌಢಶಾಲೆಗೆ ತನ್ನದೇ ಆದ ಇತಿಹಾಸವಿದೆ. ಸ್ವಾತಂತ್ರ್ಯ ಪೂರ್ವ ಸಂದರ್ಭದಲ್ಲೇ ಊರಿನ ಮಕ್ಕಳಿಗೆ ವಿದ್ಯಾಭ್ಯಾಸ ನೀಡುವ ಒಂದು ಪಾಠಶಾಲೆ ಈಗಿನ ಪ್ರೌಢಶಾಲೆ ಇರುವ ಸ್ಥಳದ ಆಗ್ನೇಯ ದಿಕ್ಕಿನ ಹಿತ್ತಿಲಿನಲ್ಲಿ ಕಾರ್ಯವೆಸಗುತ್ತಿತ್ತು. ನಂತರ ಯಾವುದೋ ಕಾರಣದಿಂದ ಅದು ಮುಚ್ಚಲ್ಪಟ್ಟು ಮಕ್ಕಳಿಗೆ ವಿದ್ಯಾಭ್ಯಾಸ ದೊರಕದಂತಾಯ್ತು.
ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ ನಂತರದ ದಿನಗಳಲ್ಲಿ ಇತರ ಪ್ರದೇಶಗಳಂತೆ ಬೇಕೂರಿನಲ್ಲಿಯೂ ಜನತೆ ಸಮೃದ್ಧ ಜೀವನಕ್ಕಾಗಿ ಸಮಗ್ರ ಅಭಿವೃದ್ಧಿಯ ಕನಸು ಕಂಡರು. ಸಮಾಜವೊಂದು ಅಭಿವೃದ್ದಿ ಕಾಣಬೇಕಾದರೆ ಅಲ್ಲಿ ಒಂದು ಶಿಕ್ಷಣ ಸಂಸ್ಧೆ ಇರಬೇಕಾದುದು ಅಗತ್ಯ. ಆದರೆ ಬೇಕೂರು ಮತ್ತು ಸುತ್ತಮುತ್ತಲಿನ ಮಕ್ಕಳು ಪಕ್ಕದಲ್ಲೆ ಈ ಸೌಲಭ್ಯವಿಲ್ಲದೆ ಪರಿತಪಿಸುವಂತಾಯಿತು. ದೂರದ ಕುಕ್ಕಾರು ಶಾಲೆಗೆ ಹೋಗಬೇಕಾದ ಕಠಿಣ ಪರಿಸ್ಧಿತಿಯಲ್ಲಿ ಸೋಂಕಾಲಿನ "Hindu Labour welfare Harijana” ಶಾಲೆಯು ಸ್ವಲ್ಪಕಾಲ ಅಸ್ಧಿತ್ವದಲ್ಲಿದ್ದ ಕಾರಣ ಇಲ್ಲಿನ ಮಕ್ಕಳಿಗೆ ಸ್ವಲ್ಪ ಉಸಿರು ಬಿಡುವಂತಾಯಿತು. ಆದರೆ ಅದೇ ಶಾಲೆ ಸರಕಾರಿ ವೆಲ್ ಫೇರ್ ಕಿರಿಯ ಪ್ರಾಥಮಿಕ ಶಾಲೆ ಮಂಗಲ್ಪಾಡಿ (G.W.L.P.S) ಎ೦ಬ ಹೆಸರಿನಿಂದ ಚೆರುಗೋಳಿಗೆ ಸ್ಥಳಾಂತರವಾದಾಗ ಬೇಕೂರಿನ ಜನತೆಯ ಕಿಂಚಿತ್ ಆಸೆಯೂ ಮುರುಟಿಹೋಯಿತು.
ಇಂತಹ ಪರಿಸ್ಥಿತಿಯಲ್ಲಿ ಈ ಪ್ರದೇಶದ ಹೆತ್ತವರು ತಮ್ಮ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಗಂಭೀರವಾಗಿ ಚಿಂತಿಸಿದರು. ಅದರಂತೆ 1951ರಲ್ಲಿ ಶಾಲಾ ಸಂಸ್ಥಾಪನಾ ಸಮಿತಿ ಮತ್ತು ಕಟ್ಟಡ ಸಮಿತಿಯನ್ನು ರಚಿಸಿದರು.
ಶ್ರೀಗಳಾದ ಪಟೇಲ್ ಶಂಕರನಾರಾಯಣ ಕುಬಣೂರಾಯರು ಅಧ್ಯಕ್ಷರಾಗಿ ಮತ್ತು ಉಬಾರ್ಲೆ ಪದ್ಮನಾಭಯ್ಯನವರು ಕಾರ್ಯದರ್ಶಿಯೂ ಆಗಿದ್ದ ಆ ಸಮಿತಿಯಲ್ಲಿ ಶ್ರೀಗಳಾದ ಪರಮೇಶ್ವರ ಬರ್ಲಾಯ,ಪಜೀರು ನಾರಾಯಣ ಭಟ್, ತನಿಯಪ್ಪ ಶೆಟ್ಟಿ, ಸುಬ್ರಾಯ ಆಚಾರ್ಯ, ಯೂಸುಫ್ ಬ್ಯಾರಿ, ಉಬಾರ್ಲೆ ಸೀತಾರಾಮಯ್ಯ, ಲಕ್ಷೀ ನಾರಾಯಣಯ್ಯ, ದೂಮಪ್ಪ ಭಂಡಾರಿ, ದೂಮಪ್ಪ ಪೂಜಾರಿ, ಕೆ. ಪಿ. ಬಳ್ಳಕ್ಕುರಾಯ, ಈಶ್ವರ ಬರ್ಲಾಯ ಮೊದಲಾದವರು ಸದಸ್ಯರಾಗಿದ್ದರು.
ಊರಿನವರ ಶ್ರಮದ ಫಲವಾಗಿ ಅಂದು ಸುಮಾರು ರೂ.1,150/- ಮೊತ್ತ ದೇಣಿಗೆಯಾಗಿ ಸಂಗ್ರಹವಾಯಿತು. ಅದರಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳದ ಅಂದಿನ ಧರ್ಮದರ್ಶಿಗಳಾಗಿದ್ದ ದಿ.ಮಂಜಯ್ಯ ಹೆಗಡೆ ಅವರು ನೀಡಿದ ರೂ. 500/- ನ್ನು ಉಲ್ಲೇಖಿಸುವುದು ನಮ್ಮ ಕರ್ತವ್ಯ. ಅಂದು ತಲೆ ಎತ್ತಿದ ನೂತನ ಕಟ್ಟಡದಲ್ಲಿ ದಕ್ಷಿಣ ಕನ್ನಡ ಡಿಸ್ಟ್ರಿಕ್ಟ್ ಎಜುಕೇಶನ್ ಕೌನ್ಸಿಲ್ ನಿಂದ ಅನುಮತಿ ದೊರತು ದಿನಾಂಕ 8-2-1952ರಂದು ಡಿಸ್ಟ್ರಿಕ್ಟ್ ಬೋರ್ಡು ಎಲಿಮೆಂಟರಿ ಶಾಲೆ ಬೇಕೂರು ಎ೦ಬ ಸಂಸ್ಥೆ ಆರಂಭವಾಯಿತು. ಅಂದು ಉದ್ಘಾಟನಾ ಕಾರ್ಯವನ್ನು ದ.ಕ ಜಿಲ್ಲಾ ಸಮಿತಿಯ ಸದಸ್ಯರಾಗಿದ್ದ ಶ್ರೀ ತೊಟ್ಟೆತ್ತೋಡಿ ನಾರಾಯಣ ಭಟ್ ಅವರು ನೆರವೇರಿಸಿದರು. ಒಂದರಿಂದ ಮೂರನೆಯ ತರಗತಿಯವರೆಗಿದ್ದ ಅಂದಿನ ಶಾಲೆಯಲ್ಲಿ ಶ್ರೀಮಾನ್ ಜನಾರ್ದನ ಆಚಾರಿಯವರು ಮೊದಲ ಉಪಾಧ್ಯಾಯ ಮತ್ತು ಮುಖ್ಯೋಪಾಧ್ಯಾಯರೆಂಬ ಗೌರವಕ್ಕೆ ಪಾತ್ರರಾದರು. ಅಂದು ಒಂದನೆಯ ತರಗತಿಗೆ ದಾಖಲಾದ ಮೊದಲ ವಿದ್ಯಾರ್ಥಿಯು ಬೇಕೂರು ರಾಮಪ್ಪ ಪೂಜಾರಿಯವರ ಮಗ ಶೇಖರ. ಇವರು ಮಾತ್ರವಲ್ಲದೆ ಬೊಳುವಾಯಿ ಕುಂಞರೈ ಭಂಢಾರಿಯವರ ಮಗಳು ಸೋಮಕ್ಕ ಅವರೂ ದಾಖಲಾಗಿದ್ದರು. ಇತರರೆಂದರೆ ಅನ್ನಪೂರ್ಣ, ಲಕ್ಷ್ಮೀ ನಾರಾಯಣಯ್ಯ ಮುಂತಾದವರು.
ಆಗ ಮೂರನೇ ತರಗತಿಗೆ ದಾಖಲಾದವರೆಂದರೆ ಶ್ರೀ ಬೊಳುವಾಯಿ ಕುಂಞರೈ ಭಂಢಾರಿಯವರ ಮಗ ಶ್ರೀ ಬಿ. ಎ೦. ಭಂಡಾರಿ, ಶ್ರೀ ದೂಮಪ್ಪ ಪಂಡಿತರ ಮಗ ಶ್ರೀ ವಿಶ್ವನಾಥ ಪೂಜಾರಿ, ಬೊಳ್ಳಾರು ಐತಪ್ಪ ಶೆಟ್ಟಿ , ಶ್ರೀ ಸುಂದರ ನಾಯ್ಕರ ಮಗ ಶ್ರೀ ಮೋಹನ ನಾಯ್ಕ್ ಸೋಂಕಾಲು, ಶಾಂಭವಿ (ಅಧ್ಯಾಪಿಕೆ) ಚಂದ್ರಶೇಖರ, ರಾಮಚಂದ್ರರಾವ್, ರಾಮದಾಸಯ್ಯ ಮೊದಲಾದವರು.
ಮುಂದೆ ಈ ಶಾಲೆಗೆ 4 ಮತ್ತು 5 ನೇ ತರಗತಿ ಸೇರಿ ಡಿಸ್ಟ್ರಿಕ್ಟ್ ಬೋರ್ಡ್ ಲೋವರ್ ಎಲಿಮೆಂಟರಿ ಶಾಲೆಯಾಯಿತು. ಆಗ ಶ್ರೀ ಮೋಣು ಮಾಸ್ತರ್ ಅಧ್ಯಾಪಕರಾಗಿ ನೇಮಕಗೊಂಡರು.
1956 ಭಾಷಾವಾರು ಪ್ರಾಂತ್ಯಗಳ ರಚನೆಯಾದಾಗ ಈ ಶಾಲೆ ಕೇರಳ ರಾಜ್ಯಕ್ಕೆ ಸೇರಿ ಒಂದು ಸರಕಾರಿ ಎಲ್. ಪಿ ಶಾಲೆಯಾಯಿತು. ಇಲ್ಲಿ ಮುಖ್ಯೋಪಾದ್ಯಾಯರಾಗಿ ಶ್ರೀ ಜನಾರ್ದನ ಆಚಾರಿ ಅವರಲ್ಲದೆ ಶ್ರೀ ನಾರಾಯಣ ನಾಯ್ಕ್ ಶ್ರೀ ಐ.ಸದಾಶಿವ ಆಳ್ವ, ಶ್ರೀ ರಾಮಪ್ಪ ಐಲ್ ಮುಂತಾದವರು ಸೇವೆ ಸಲ್ಲಿಸಿದ್ದರು. ಈ ಮಧ್ಯೆ 1969ರಲ್ಲಿ ಮಲೆಯಾಳ ಮಾಧ್ಯಮವೂ ಇಲ್ಲಿ ಆರಂಭವಾಯಿತು.
1974ರಲ್ಲಿ ಈ ಶಾಲೆ ಹಿರಿಯ ಪ್ರಾಥಮಿಕ ಶಾಲೆಯಾಗಿ ಭಡ್ತಿಪಡೆಯಿತು. ಶ್ರೀಯುತರಾದ ಪದ್ಮನಾಭಯ್ಯ ಉಬಾರ್ಲೆ, ಬೇಕೂರು ಕೇಶವ ಭಟ್, ಬೊಳ್ಳಾರು ನಾರಾಯಣ ಶೆಟ್ಟಿ, ಉಬಾರ್ಲೆ ರಾಮಚಂದ್ರಯ್ಯರ ಮಗ ಉಬಾರ್ಲೆ ಸೀತಾರಾಮಯ್ಯ ಮೊದಲಾದವರು. ಮಾತ್ರವಲ್ಲದೆ ಅಂದಿನ ಮುಖ್ಯೋಪಾಧ್ಯಾಯರಾಗಿದ್ದ ಶ್ರೀ ರಾಮಪ್ಪ ಐಲ್ ಮತ್ತು ಅಧ್ಯಾಪಕರಾಗಿದ್ದ ಶ್ರೀ ಸಿ. ರಾಘವ ಬಲ್ಲಾಳ್ ಅಲ್ಲದೆ ಈ ಆಗಿನ ಜಿಲ್ಲಾ ವಿದ್ಯಾದಿಕಾರಿಗಳಾಗಿದ್ದ ಶ್ರೀ ರಾಮಪ್ಪ ಪದಕಣ್ಣಾಯರು ಈ ಪವಿತ್ರ ಕಾರ್ಯದಲ್ಲಿ ಭಾಗಿಗಳಾಗಿದ್ದರು. ಆ ಸಂದರ್ಭದಲ್ಲಿ 20 x 60 ರ ಒಂದು ತಾತ್ಕಾಲಿಕ ಕಟ್ಟಡದ ನಿರ್ಮಾಣವಾಯಿತು. ಆ ಕಟ್ಟಡವೇ ಈಗ ಶಾಲೆಯ ಪಡುಭಾಗದಲ್ಲಿರುವ ಹಂಚುಹಾಕಿದ ಶಾಶ್ವತ ಶೆಡ್ ಆಗಿರುತ್ತದೆ. ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸಿದ ಮುಖ್ಯೋಪಾಧ್ಯಾಯರು ಶ್ರೀಯುತರಾದ ಆನಂದ, ಬಿ.ಗಣಪತಿ ಭಟ್, ನಾರಾಯಣನ್, ಸುಬ್ಬಮಣಿಯಾಣಿಗಳಾಗಿರುತ್ತಾರೆ. ಆಗ ಕಣ್ಣೂರು ಜಿಲ್ಲೆಯ RDO ಆಗಿದ್ದ ಶ್ರೀ ಮಾಧವನ್ ರವರ ಸಹಕಾರದಿಂದ ಶಾಲೆಗೆ ಅಗತ್ಯವಾದ ಸ್ಥಳ ದೊರೆಯಿತು. ಶಾಲೆಯ ಎದುರುಗಡೆ ಇದ್ದ ಬೇರೆಯವರ ದರ್ಕಾಸಾಗಿದ್ದ ಸ್ಥಳವನ್ನು ತೀವ್ರ ಪ್ರಯತ್ನ ಮಾಡಿ ಶಾಲೆಗೆ ದೊರಕುವಂತೆ ಮಾಡಿದ ಅಂದಿನ ನೀರಾವರಿ ಮಂತ್ರಿಗಳಾಗಿದ್ದ ಡಾ.ಸುಬ್ಬರಾವ್ ಮತ್ತು ಶಾಲೆಯ ಅಂದಿನ ಶಿಕ್ಷಕ – ರಕ್ಕ ಸಂಘದ ಉಪಾಧ್ಯಕ್ಷರೂ ಆಗಿದ್ದ ಬೊಳ್ಳಾರು ನಾರಾಯಣ ಶೆಟ್ಟಿಯವರನ್ನು ಎಷ್ಟು ನೆನಪಿಸಿದರೂ ಕಡಿಮೆಯೇ.
1981 ರಲ್ಲಿ ಶ್ರೀ. ಇ.ಕೆ. ನಾಯನಾರ್ ಅವರು ಮುಖ್ಯ ಮಂತ್ರಿಯಾಗಿದ್ದಾಗ ಊರಿನ ವಿದ್ಯಾಭಿಮಾನಿಗಳ ನಿವೇದನೆಯಂತೆ ಇಲ್ಲಿ ದಿನಾಂಕ 9-11-1981 ರಂದು ಹೈಸ್ಕೂಲ್ ತರಗತಿಗಳು ಆರಂಭವಾದವು. ಆ ಸಂದರ್ಭದಲ್ಲಿ ಸಂಸ್ಥೆಗೆ 20 ಸೆಂಟ್ಸ್ ಸ್ಥಳವನ್ನು ಉಚಿತವಾಗಿ ಒದಗಿಸಿದವರು ಶ್ರೀಪಟ್ಟೆಕಂಡ ಇಬ್ರಾಹಿಂ ಕುಂಞ ಅವರು. ಹೈಸ್ಕೂಲ್ ಕಟ್ಟಡದ ನಿರ್ಮಾಣಕ್ಕಾಗಿ ರಚಿಸಿದ ಅಂದಿನ ಸಮಿತಿಯ ಅಧ್ಯಕ,ರಾಗಿದ್ದವರು ಶ್ರೀ ಪದ್ಮನಾಭ ಭಟ್. ಕೆ ಬೇಕೂರು ಉಪಾಧ್ಯಕ್ಷರಾಗಿ ಶ್ರೀ ಬೊಳ್ಳಾರು ನಾರಾಯಣ ಶೆಟ್ಟಿ , ಉಬಾರ್ಲೆ ಸೀತಾರಾಮಯ್ಯ ಮತ್ತು ಉಮ್ಮರ್ ಹಾಜಿ ಬೇಕೂರು ದುಡಿದಿದ್ದರು. ಕಾರ್ಯದರ್ಶಿಗಳಾಗಿ ಶ್ರೀ ಪಟ್ಟೆಕಂಡ ಇಬ್ರಾಹಿಂ ಕುಂಞ, ಉಪಕಾರ್ಯದರ್ಶಿಗಳಾಗಿ ಶ್ರೀ ಸಿ. ರಾಘವ ಬಲ್ಲಾಳ್ ಮತ್ತು ಶ್ರೀ ಬೊಳುವಾಯಿ ತಿಮ್ಮಪ್ಪ ಭಂಡಾರಿಯವರೂ, ಕೋಶಾಧಿಕಾರಿಗಳಾಗಿ ಉಬಾರ್ಲೆ ಕೃಷ್ಣಯ್ಯನವರು(ಈಗ ದಿವಂಗತರು ಶ್ಲಾಘನೀಯವಾಗಿ ಶ್ರಮಿಸಿದ್ದರು. ಇವರೆಲ್ಲರ ಸರ್ವಪ್ರಯತ್ನದ ಫಲವಾಗಿ ಊರವರ ಸಹಕಾರದಿಂದ 20x20 ಎರಡು ಕೊಠಡಿಗಳ ನಿರ್ಮಾಣ ಕಾರ್ಯನಡೆದು ಅದರಲ್ಲಿ ಹೈಸ್ಕೂಲ್ ತರಗತಿಯು ಪ್ರಾರಂಭಗೊಂಡಿತು.
ಪ್ರೌಢಶಾಲೆಯಾಗಿ ಉದ್ಘಾಟನೆಗೊಂಡ ಮರುವರ್ಷಕ್ಕೆ ತರಗತಿಗಳು ನಡೆಸುವರೇ 20x20 ರ ಕೊಠಡಿಗಳ ಅಗತ್ಯವಿತ್ತು. ಅದಕ್ಕಾಗಿ ಶ್ರೀಗಳಾದ ಕೆ. ಪದ್ಮನಾಭ ಭಟ್ , ಬೊಳ್ಳಾರು ನಾರಾಯಣ ಶೆಟ್ಟಿ, ಮಹಮ್ಮದ್ ಬಿ. ಕೆ. ಮತ್ತು ಸಿ. ರಾಘವ ಬಲ್ಲಾಳ್ ಅವರು ಮುಂಬಾಯಿಗೆ ಹೋಗಿ ಹಣ ಸಂಗ್ರಹಿಸುವಲ್ಲಿ ಕಾರ್ಯ ಪ್ರವತ್ತರಾದರು.ಆಗ ಅಲ್ಲಿ ಸಹಕರಿಸಿದ ಮಹನಿಯರೆಂದರೆ ಮಮ್ಮದ್ ಖಾದರ್ ಕೆದ್ಯಾರ್ (ಈಗ ದಿವಂಗತರು) ಶ್ರೀ ಅಂದು ಅಬ್ದುಲ್ ರಹಿಮಾನ್ ಕುಬಣೂರು(ಈಗ ದಿವಂಗತರು)ಶ್ರೀ ಅಬ್ದುಲ್ ಎ.ಕೆ. ಕುಬಣೂರು ಮತ್ತು ಅಬ್ದುಲ್ಲ ಕಾಡಮೂಲೆ. ಅವರು ಇವರೆಲ್ಲರ ಸರ್ವಪ್ರಯತ್ನದ ಫಲವಾಗಿ ಕೇವಲ 3 ತಿಂಗಳಲ್ಲಿ 20x20 ರ 3 ಕೊಠಡಿಗಳ ನಿರ್ಮಾಣ ಕೆಲಸವು ಸುಗಮವಾಯಿತು. ಇವರನ್ನು ಈ ಸಂಸ್ಥೆಯು ಎ೦ದೂ ಮರೆಯುವಂತಿಲ್ಲ.
1984 ರಲ್ಲಿ ಶ್ರೀ.ಎನ್ ಇಬ್ರಾಹಿಂ ಅವರು ಮುಖ್ಯೋಪಾದ್ಯಾಯರಾಗಿದ್ದ ಈ ಪ್ರೌಢಶಾಲೆಯಲ್ಲಿ 1987ರಲ್ಲಿ ಶ್ರೀ ಇ.ರಾಮಭಟ್ ಮುಖ್ಯೋಪಾದ್ಯಯರು. ಅವರ ಸಕಾಲಿನ ಪ್ರಯತ್ನದ ಫಲವಾಗಿ 1987ರ ವಿದ್ಯಾ ವರ್ಷದಲ್ಲಿ ಇಲ್ಲಿ SSLC ಪರೀಕ್ಷೆಯ ಕೇಂದ್ರ ತೆರೆಯಲು ಸಾಧ್ಯವಾಯಿತು.
ವಿಧ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಾ ಹೋದಂತೆ 22.8.89ರಲ್ಲಿ ಸ್ಥಳಾವಕಾಶದ ಕೊರತೆಯಿಂದ ಸೆಶನ್ ವ್ಯವಸ್ಥೆಯನ್ನು ಜಾರಿಗೊಳಿಸಿ ಬೆಳಗ್ಗೆ 8.30 ರಿಂದ ಸಾಯಂಕಾಲ 5.00 ಗಂಟೆಯವರೆಗೆ ತರಗತಿಗಳನ್ನು ನಡೆಸಲಾಯಿತು. ಮಕ್ಕಳ ವಿದ್ಯಾಭ್ಯಾಸಕ್ಕೆ ಇದರಿಂದ ಕೊಂಚ ಅನುಕೂಲವಾದರೂ ಈ ಸ್ಥಿತಿ ಅನಿವಾರ್ಯ ಆಗಿತ್ತು.
ತಾರೀಕು 3.4.1993ರಲ್ಲಿ ನಮ್ಮೀ ಹೈಸ್ಕೂಲಿನ ದಶಮಾನೋತ್ಸವವು ಬಹಳ ವಿಜೃಂಭಣೆಯಿಂದ ನಡೆಯಿತು. ಇದರ ಸಂಸ್ಮರಣಾರ್ಥವಾಗಿ 20x20 ರ ವೇದಿಕೆಯಿಂದೊಡಗೂಡಿದ ಎರಡು ಕೊಠಡಿಗಳು ಊರಪರವೂರ ಜನರ ತನು ಮನ ಧನ ಸಹಾಯದಿಂದ ನಿರ್ಮಿಸಲಾಯಿತು.
ಶ್ರೀ ರಾಮಣ್ಣ ರೈಯವರು ಸಂಸದರಾಗಿರುವಾಗ ಸಂಸದರ ಫಂಡಿನಿಂದ ನಮ್ಮ ಶಾಲೆಗೆ ರೂಪಾಯಿ ಐವತ್ತು ಸಾವಿರ ಕೊಠಡಿಯ ನಿರ್ಮಾಣಕ್ಕಾಗಿ ದೊರಕಿರುತ್ತದೆ. ಮಾಜಿ ಜಿಲ್ಲಾ ಪಂಚಾಯತು ಅಧ್ಯಕ್ಷರಾದ ಈ ಅಹಮ್ಮದ್ ಕುಂಞಯವರ ಅಧಿಕಾರಾವಧಿಯಲ್ಲಿ 18X20 ರ ನಾಲ್ಕು ಕೊಠಡಿಗಳುಳ್ಳ 2 ಕಟ್ಟಡಗಳು ಜಿಲ್ಲಾ ಪಂಚಾಯತು ವತಿಯಿಂದ ನಮಗೆ ದೊರಕಿರುವುದನ್ನು ನಾವು ಇಂದು ಸ್ಮರಿಸುತ್ತಿದ್ದೇವೆ. ಹಾಗೆಯೇ ಶಾಲೆಯ
ಪೂರ್ವಭಾಗದಲ್ಲಿರುವ ಬಯಲುರಂಗ ಮಂಟಪವನ್ನು ದಿ. ಬೊಳುವಾಯಿ ಕುಂಞರೈ ಭಂಡಾರಿಯವರ ಸ್ಮರಣಾರ್ಥವಾಗಿ ಅವರ ಮಕ್ಕಳು ನಿರ್ಮಿಸಿಕೊಟ್ಟಿರುತ್ತಾರೆ, ಸ್ಟೀಲು ಕಪಾಟು ಒಂದು ಉಬಾರ್ಲೆ ಸೀತಾರಾಮಯ್ಯರು ಅವರ ಮಗಳು ವೇದಾವತಿಯವರ ಸ್ಮರಣಾರ್ಥವಾಗಿ ಶಾಲೆಗೆ ಕೊಟ್ಟಿರುತ್ತಾರೆ. ಉಬಾರ್ಲೆ ಕೃಷ್ಣಯ್ಯರವರು ಶಾಲೆಗೆ ಒಂದು ಕಂಚಿನ ಗಂಟೆಯನ್ನು ದೇಣಿಗೆಯಾಗಿ ಕೊಟ್ಟಿರುತ್ತಾರೆ. ಶಾಲಾ ಎದುರುಗಡೆ ಇರುವ ಧ್ವಜಸ್ತಂಭದ ದುರಸ್ತಿ ಕಾರ್ಯವನ್ನು ಇತ್ತೀಚೆಗೆ ಬೇಕೂರು ಸ್ಪೋರ್ಟ್ಸ್ ಕ್ಲಬ್ ನವರು ಮಾಡಿರುತ್ತಾರೆ. ಮಂಗಲಪಾಡಿ ಪಂಚಾಯತಿನ ವತಿಯಿಂದ ಸುಮಾರು 1 ಲಕ್ಷ60 ಸಾವಿರ ರೂ ವೆಚ್ಚದ ಒಂದು ಕ್ಲಾಸ್ ರೂಂ ಮತ್ತು ಒಂದು ಅಡಿಗೆ ಶಾಲೆ ನಿರ್ಮಾಣಗೊಂಡಿದೆ. ಪಂಚಾಯತಿನ ಮಾಜಿ ಅಧ್ಯಕ್ಷೆ ಶ್ರಿಮತಿ ಆಯಿಶಾತ್ ತಾಹಿರ (ಈಗ ಬ್ಲೋಕ್ ಪಂಚಾಯತ್ ಅಧ್ಯಕ್ಷೆ ) ರವರನ್ನು ಮತ್ತು ಆಗಿನ ಸದಸ್ಯರೆಲ್ಲರನ್ನು ಇದಕ್ಕಾಗಿ ಸ್ಮರಿಸುತ್ತೇವೆ ಪ್ರಸ್ತುತ ವರ್ಷ ಶಾಸಕರ ನಿಧಿಯಿಂದ 2ಲಕ್ಷ ರೂ. ವೆಚ್ಚದ 2 ಕೊಠಡಿಗಳ ನಿರ್ಮಾಣವಾಗಿರುತ್ತದೆ ಇದಕ್ಕಾಗಿ ಈಗಿನ ಜಿಲ್ಲಾ ಪಂಚಾಯತಿನ ವತಿಯಿಂದ, ನಮ್ಮ ಶಾಲೆಗೆ ಲಭಿಸಿರುತ್ತದೆ. ಇದಕ್ಕಾಗಿ ಈಗಿನ ಜಿಲ್ಲಾ ಪಂಚಾಯತಿನ ಅಧ್ಯಕ್ಷೆಯಾಗಿರುವ ಶ್ರೀಮತಿ ಪದ್ಮಾವತಿ ಮತ್ತು ಜಿಲ್ಲಾ ಪಂಚಾಯತು ಸ್ಟೇಂಡಿಂಗ್ ಕಮಿಟಿ ಚೇರ್ಮೇನ್ ಗಳಾಗಿರುವ ಶ್ರೀ ಗೋಪಾಲನ್ ಮಾಸ್ತರ್ ಮತ್ತು ಬಿ.ವಿ ರಾಜನ್ ರವರಿಗೆ ನಾವು ಕೃತಜ್ಞತೆಯನ್ನೀಯುತ್ತೇವೆ.
1992 ರಲ್ಲಿ ಮುಖ್ಯೋಪಾಧ್ಯಾಯರಾಗಿದ್ದ ಶ್ರೀ ಕೋಡಿಯಡ್ಕ ಅಬ್ದುಲ್ಲ ಅವರಿಗೆ ಉತ್ತಮ ಅಧ್ಯಾಪಕನೆಂಬ, ರಾಜ್ಯಪ್ರಶಸ್ತಿಯೊಂದಿಗೆ 'ನ್ಯಾಶನಲ್ ಪೌಂಡೇಶನ್ ಫಾರ್ ಟೀಚರ್ಸ್ ವೆಲ್ಫೇರ್ 'ವತಿಯಿಂದ ಪ್ರೊಫೆಸರ್ ಡಿ.ಸಿ ಶರ್ಮಾ ಮೆಮೋರಿಯಲ್ ಪ್ರಶಸ್ತಿಯು ದೊರಕಿರುತ್ತದೆ. ಬೇಕೂರು ಹೈಸ್ಕೂಲಿನ ಸರ್ವತೋಮುಖವಾದ ಅಭಿವೃದ್ಧಿಗೆ ಈ ದಕ್ಷ ಮುಖ್ಯೋಪಾಧ್ಯಾಯರ ಉತ್ತಮ ಆಡಳಿತವೇ ಕಾರಣವಾಗಿದೆ. 1993 ರಲ್ಲಿ ನಿವೃತ್ತರಾದ
ಇವರು 26.6.2002 ರಂದು ನಿಧನರಾದರು. ಅಗಲಿದ ಈ ದಿವ್ಯಚೇತನಕ್ಕೆ ನಮ್ಮೆಲ್ಲರ ನಮನಗಳು.
1973 ರಿಂದ 31 ವರ್ಷಗಳ ಕಾಲ ಈ ಸಂಸ್ಥೆಯಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ ಶ್ರೀ ಸಿ. ರಾಘವ ಬಲ್ಲಾಳ್ ರಿಗೆ 1998ರಲ್ಲಿ 'ಉತ್ತಮ ಅಧ್ಯಾಪಕ 'ನೆಂಬ ರಾಜ್ಯ ಪ್ರಶಸ್ತಿ ದೊರಕಿರುತ್ತದೆ ಎ೦ಬುದು ನಮಗೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ. ಈ ಶಾಲೆಯ ಅಭಿವೃದ್ಧಿ ಕೆಲಸಗಳಲ್ಲಿ ಶ್ರೀ ಬಲ್ಲಾಳರು ಆಹೋರಾತ್ರಿ ದುಡಿದಿರುವುದು ಸತ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಶ್ರೀಯುತರು 2002 ರಲ್ಲಿ ಸೇವೆಯಿಂದ ನಿವೃತ್ತಯಾಗಿರುವರು.
ಸುಮಾರು ಐವತ್ತು ದಶಕಗಳ ಹಿಂದೆ ಕುಡಿಯೊಡದ ಈ ಸಂಸ್ಥೆಯು ಇಂದು ಈ ವಠಾರದ ವಿದ್ಯಾಸಂಸ್ಥೆಗಳಲ್ಲಿ ಅತ್ಯುತ್ತಮ, ವಿದ್ಯಾಸಂಸ್ಥೆ ಎನಿಸಿಕೊಂಡು ಪಾಠ ಮತ್ತು ಪಾಠೇತರ ಚಟುವಟಿಕೆಗಳಲ್ಲಿಯೂ ಉಪಜಿಲ್ಲೆ, ಜಿಲ್ಲೆ, ರಾಜ್ಯ ಮಟ್ಟದಲ್ಲಿ ಹೆಸರುಗಳಿಸುತ್ತಾ ಮುನ್ನಡೆಯುತ್ತಿದೆ.
No comments:
Post a Comment